ಮೊನ್ನೆ ಇದ್ದಕ್ಕಿದ್ದ ಹಾಗೆ ನಡು ನಿದ್ದೆಯಿಂದ ಎಚ್ಚರ ಆಯಿತು. ವಿಶೇಷ ಏನು ಅಂತ ಕೇಳ್ತೀರ? ಬಲ ಕಿವಿಯಲ್ಲಿ ಒಂದು ಸೊಳ್ಳೆ ಹೊಕ್ಕಿತ್ತು. ಪಾಪ ಅಂಕು ಡೊಂಕು ಒಣ ಬಾವಿಯಲ್ಲಿ ಸಿಕ್ಕಿ ಬಿದ್ದು ಹಿಂದು ಬರಲಾಗದೆ ಮುಂದೆ ಹೋಗಲಾಗದೆ ಫಜೀತಿ ಪಡುತ್ತಿತ್ತು. ನನಗೋ ನಿದ್ದೆ ಹೋಗಿದ್ದೊಂದು ಕಡೆ, ಈಗ ಸೊಳ್ಳೆ ಏನಾದ್ರು ಕಿವಿ ಒಲವೆ ಕಚ್ಚಿ ಬಿಟ್ರೆ ಏನ್ ಮಾಡೋದು ಅನ್ನೋ ಯೋಚನೆ ಇನ್ನೊಂದ್ಕಡೆ. ಸರಿ, ಒಳ ಕಿವಿಯ ತಮ್ಮಟೆ ಹತ್ರ ಹೋಗ್ತಾ ಇದ್ದ ಹಾಗೆ, ನಗಾರಿ ಬಾರಿಸಿದ ಸದ್ದು, ಕರ ಕರ ಪರ ಪರ ಅಂತ ರಾತ್ರಿಯ ನೀರವ, ನನ್ನ ಯೋಚನೆ ಎರಡನ್ನೂ ಕದಿಯುವ ಸೊಳ್ಳೆ. ಮಗ್ಗುಲು ಬದಲಿಸಿದರೆ ಹೊರ ಹೋಗಬಹುದು ಅನ್ನೋ ಯೋಚನೆ ಬಂದಿದ್ದೆ, ಮಗ್ಗುಲು ಬದಲಿಸಿದೆ. ಊಹೂನ್ ಸೊಳ್ಳೆ ಜಪ್ಪಯ್ಯ ಅನ್ನಲಿಲ್ಲ. ಮತ್ತೆ ಕರ ಪರ, ಯಾವ ಎಮೆರ್ಜೆನ್ಸಿ ಹಿಂಸೆಗೂ ಕಮ್ಮಿ ಇಲ್ಲದ ಕರ್ಣ ವೇದನ. ಅಯ್ಯೋ ದೇವರೇ ಈ ನಡು ರಾತ್ರಿಯಲ್ಲಿ ಯಾವ ಕಿವಿ ಡಾಕ್ಟರ ಹುಡುಕಲಿಕ್ಕೆ ಹೋಗಲಿ ಅಂಬೋ ಸಂಕಟ ಬೇರೆ. ಅಮ್ಮವರನ್ನು ಏಳಿಸೋಕ್ಕೆ ಭಯ (ಆಮೇಲೆ ಸುರುವಾಗೋ ಹಿಂಸೆಗಿಂತ ಕಿವಿ ನೋವ ವಾಸಿ) ಬೇರೆ. ಇದರ ಮಧ್ಯೆ ಕಿವಿಗೆ ಹೊಕ್ಕೊಂಡ ಅರಳೆ ಯಾಕಪ್ಪ ಮಲಗೋ ಮೊದಲು ತಗಿ ಬೇಕಿತ್ತು ಅಂತ ನನ್ನನ್ನೇ ಜರೆಯುತ್ತಾ ಅತ್ತಿತ್ತ ಮಗ್ಗುಲ ಬದಲಿಸೋ ಕೆಲಸ ಸುರು ಮಾಡಿದೆ. ಇಸ್ತರೊಳಗೆ ಪಾಪ ಸೊಳ್ಳೆ, ಯಾವ ಕಾಲದಿಂದ ಕಲೆ ಹಾಕಿದ್ದ ಗುಗ್ಗೆ ರಾಶಿ ಒಳಗೆ ಸಿಲುಕಿ ಸುಮ್ಮನಾಯ್ತು. ಅಯ್ಯಬ್ಬ ಬದಿಕಿದೆ ದೇವರೇ ಅಂತ ಮಲಗೋ ಮೊದ್ಲು ನೆನಪಾಗಿದ್ದು ಅಪ್ಪ ನನ್ನ ಬಾಲ್ಯದಲ್ಲಿ ಕಾಲ ಮೇಲೆ ಮಲಗಿಸಿಕೊಂಡು ಪ್ರತಿ ವಾರ ಕಿವಿ ಸ್ವಚ್ಚ ಮಾಡ್ತಿದ್ದ ಸೀನು. ಭಾನುವಾರ ಮಧ್ಯಾನ ಸ್ನಾನದ ನಂತರದ ಕಾರ್ಯ ಅದೇ. ಒಂದು ಸಣ್ಣ ಸೈಕಲ್ ಸ್ಪೋಕೆ ತುದಿಗೆ ಅರಳೆ ಸುತ್ತಿ, ಹಗೂರಕ್ಕೆ ಕಿವಿಯಾಗೆ ಸುತ್ತಿಸುತ್ತಿದ್ದರೆ, ಸಣ್ಣಕ್ಕೆ ಅಮಲು ಏರ್ಕೊತಿತ್ತು. ನಿಜ ಹೇಳ್ಬೇಕು ಅಂದ್ರೆ ಅದ್ನ ಅನುಭವಿಸ್ಬೋದಷ್ಟೇ. ಬರ್ಯೋಕೆ ಖಂಡಿತ ಆಗಲ್ಲ. ಈ ಕಾರ್ಯ ಇನ್ನೊಂದು ಕಿವಿಗೂ ಮುಗಿತು ಅಂದ್ರೆ ನಾವ್ ರೆಡಿ. ಸಣ್ಣದಾಗಿ ಹೇಳ್ಬೇಕಂದ್ರೆ ಪ್ರತಿ ವಾರ ನಾನು ಕಾಯ್ತಿದ್ದ ವಿಶೇಷ ಕಾರ್ಯ ಇದು. ಅಪ್ಪ ಏನಾದ್ರೂ ಕಿವಿ ಕ್ಲೀನ್ ಮಾಡಿ ಇಟ್ಟಿದ್ರೆ, ಸೊಳ್ಳೆ ನನ್ನ ಕಿವಿ ಧಂ ಅನ್ನಿಸ್ಬಿತ್ತಿರೋದೇನೋ?
No comments:
Post a Comment